ನ್ಯೂಲೆಂಡ್ಸ್, ಜಾನ್ ಅಲೆಕ್ಸಾಂಡರ್ ರೈನ
	1838-1898. ರಾಸಾಯನಿಕ ಧಾತುಗಳನ್ನು ಶಾಸ್ತ್ರೀಯವಾಗಿ ವರ್ಗೀಕರಿಸುವುದರಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಿದ ಮೊದಲಿಗರಲ್ಲೊಬ್ಬನಾದ ಇಂಗ್ಲಿಷ್ ರಸಾಯನ ವಿಜ್ಞಾನಿ. ಲಂಡನ್ನಿನ ಒಂದು ಭಾಗವಾದ ಸೌತ್‍ವಾರ್ಕಿನಲ್ಲಿ ಜನಿಸಿದ ನ್ಯೂಲೆಂಡ್ಸ್ ಪ್ರಸಿದ್ಧ ರಸಾಯನ ವಿಜ್ಞಾನಿ ಹಾಫ್‍ಮನ್ನನ ಬಳಿ ಆ ವಿಜ್ಞಾನವನ್ನು ಅಭ್ಯಾಸ ಮಾಡಿ 1860ರಲ್ಲಿ ಗ್ಯಾರಿಬಾಲ್ಡಿಯ ಸೈನ್ಯವನ್ನು ಸೇರಿದ. ತಾಯಿಯ ಕಡೆಯಿಂದ ಆತನ ಪೂರ್ವಜರು ಇಟ್ಯಾಲಿಯನ್ನರಾಗಿದ್ದುದರಿಂದ ಬಹುಶಃ ಗ್ಯಾರಿಬಾಲ್ಡಿಯ ದೇಶಪ್ರೇಮದ ಕರೆಗೆ ಓಗೊಟ್ಟು ಅವನ ಸೈನ್ಯವನ್ನು ಸೇರಿ ಹೋರಾಡಿದುದಾಗಿರಬೇಕು. ಇಟಲಿಯಿಂದ ಹಿಂದಿರುಗಿದ ಮೇಲೆ ಅವನು ವಿಕ್ಟೋರಿಯ ಡಾಕ್ಸ್‍ನಲ್ಲಿನ ಒಂದು ಸಕ್ಕರೆ ಕಾರ್ಖಾನೆಯಲ್ಲಿ  ರಾಸಾಯನಿಕವಾಗಿ ಶಾಸ್ತ್ರಜ್ಞನಾಗಿ ಕೆಲಸ ಮಾಡಿದ.

	ರಾಸಾಯನಿಕ ಧಾತುಗಳ ವರ್ಗೀಕರಣದಲ್ಲಿ ಆಸಕ್ತಿ ತಳೆದ ನ್ಯೂಲೆಂಡ್ಸ್. 1864ರಲ್ಲಿ, ಧಾತುಗಳನ್ನೆಲ್ಲ ಅವುಗಳ ಪರಮಾಣು ತೂಕಗಳ ಆರೋಹಣ ಕ್ರಮದಲ್ಲಿ ಬರೆದು, ಆ ಪಟ್ಟಿಯಲ್ಲಿ ಪ್ರತಿ ಎಂಟನೆಯ ಧಾತು ತನ್ನ ಗುಣಲಕ್ಷಣಗಳಲ್ಲಿ ಮೊದಲನೆಯ ಧಾತುವನ್ನು ಹೋಲುವುದೆಂಬುದನ್ನು ಗಮನಿಸಿದ. ಸಂಗೀತದಲ್ಲಿ ಸಪ್ತಸ್ವರಗಳಾದ ಮೇಲೆ ಬರುವ ಎಂಟನೆಯ ಸ್ವರ ಮೊದಲ ಸ್ವರದ ಪುನರಾವರ್ತನೆಯಾಗುವಂತೆ ಇಲ್ಲಿಯೂ ಆಗುವುದನ್ನು ಕಂಡ ನ್ಯೂಲೆಂಡ್ಸ್ ತನ್ನ ಆವಿಷ್ಕಾರವನ್ನು ಅಷ್ಟಕ ನಿಯಮವೆಂಬ ಒಂದು ನಿಯಮದ ರೂಪದಲ್ಲಿ ಸೂತ್ರೀಕರಿಸಿದ. ಪರಮಾಣುತೂಕಗಳ ಪಟ್ಟಿಯಲ್ಲಿ ಎರಡು ಅಷ್ಟಕಗಳಾದ ತರುವಾಯ ಈ ನಿಯಮವನ್ನು ಅನ್ವಯಿಸಲು ಸಾಧ್ಯವಾಗಲಿಲ್ಲವಾದರೂ ಅದು ಮುಂದೆ ಬಂದ ಮೆಂಡಿಲೀಫನ ಆವರ್ತ ನಿಯಮಕ್ಕೆ ಮಾರ್ಗಸೂಚಕವಾಯಿತು.				 (ನೋಡಿ- ಆವರ್ತಕೋಷ್ಟಕ)

	ರಸಾಯನವಿಜ್ಞಾನಿಗಳ ಸಭೆಯೊಂದರಲ್ಲಿ ಆವಿಷ್ಕಾರವನ್ನು ಮಂಡಿಸಿದಾಗ ನ್ಯೂಲೆಂಡ್ಸ್ ಅನ್ಯಾಯವಾದ ಅಪಹಾಸ್ಯಕ್ಕೆ ಗುರಿಯಾದ. ಧಾತುಗಳನ್ನು ಅವುಗಳ ಹೆಸರಿನ ಪ್ರಥಮಾಕ್ಷರಗಳ ಅಕಾರಾದಿ ಕ್ರಮದಲ್ಲಿ ಬರೆದರೆ ಇನ್ನೂ ಉತ್ತಮ ಫಲಿತಾಂಶ ದೊರಕುವುದೇ ಎಂದು ಪರೀಕ್ಷಿಸಲಿಲ್ಲವೇಕೆ ಎಂಬ ವ್ಯಂಗ್ಯದ ಮಾತು ಕೇಳಿ ಬಂತು. ಆದರೆ ಅದಾದ ಐದು ವರ್ಷದಲ್ಲಿಯೇ ಮೆಂಡಿಲೀಫನ ಆವರ್ತನಿಯಮ ಪ್ರಕಟವಾಗಿ ಅದರ ಆಧಾರದ ಮೇಲೆ ರಚಿಸಿದ ಆವರ್ತಕೋಷ್ಟಕ ಪ್ರಚಾರಕ್ಕೆ ಬಂದುದರಿಂದ ನ್ಯೂಲೆಂಡ್ಸ್ ಬಗ್ಗೆ ಸಮಾಕಾಲೀನ ವಿಜ್ಞಾನಿಗಳಲ್ಲಿ ಗೌರವ ಮೂಡಲಾರಂಭಿಸಿತು. 1887ರಲ್ಲಿ ರಾಯಲ್ ಸೊಸೈಟಿಯ ಡೇವಿ ಪದಕವನ್ನಿತ್ತು ಅವನನ್ನು ಸನ್ಮಾನಿಸಿದರು. 1898 ಜುಲೈ 29ರಂದು ಇವನು ಲಂಡನ್ ನಗರದಲ್ಲಿ ನಿಧನ ಹೊಂದಿದ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ